ಅತಿನಿಯಮ ಪದ್ಧತಿ
	
ನೌಕರಶಾಹಿ ಆಡಳಿತ ಪದ್ಧತಿಯ ಅನೇಕ ಲೋಪದೋಷಗಳಲ್ಲಿ ಇದೂ (ರೆಡ್ ಟೇಪಿಸಮ್) ಒಂದು. ಆಡಳಿತ ವ್ಯವಸ್ಥೆಯಲ್ಲಿ ಸಂಪ್ರದಾಯಬದ್ಧವಾಗಿ ಕಾನೂನು ಮತ್ತು ಕಟ್ಟಳೆಗಳನ್ನು ಅನುಸರಿಸುವುದು ಒಳ್ಳೆಯದೇ ಆದರೂ ಅದನ್ನು ತೀರ ಹೆಚ್ಚುಮಾಡಿದರೆ ಕೆಲಸ ಅನಾವಶ್ಯಕವಾಗಿ ತಡವಾಗಬಹುದು. ಕೆಲವು ಬಾರಿ ಕೆಲಸವೇ ಆಗದೆ ಕೆಟ್ಟುಹೋಗಬಹುದು. ಕೆಲಸ ನ್ಯಾಯಸಮ್ಮತವಾಗಿ ನೆರವೇರಬೇಕಾದರೆ ಕಾನೂನು ನಿಯಮಗಳ ಅಗತ್ಯ ಇದ್ದೇ ಇದೆ. ಅವು ಕೆಲಸ ಸಾಧನೆಯ ಮಾರ್ಗ ಮಾತ್ರ. ಮಾರ್ಗವೇ ಗುರಿಯೆಂದು ತಿಳಿದರೆ ಅತಿನಿಯಮ ಪದ್ಧತಿಗೆ ಎಡೆಗೊಟ್ಟಂತಾಗುತ್ತದೆ. ಆಡಳಿತದಲ್ಲಿ ಕೆಲಸಗಳು ಸುಸೂತ್ರವಾಗಿ ಬೇಗ ನಡೆಯಲಾರವು . 
	
ಸರ್ಕಾರಿ ಕಚೇರಿಗಳಲ್ಲಿ ಒಂದೊಂದು ವಿಷಯದ ಪತ್ರಕ್ಕೂ ಒಂದೊಂದು ಫೈಲು ಇದ್ದು ಅದನ್ನು ಕೆಂಪು ಪಟ್ಟಿಗಳಿಂದ ಬಿಗಿದಿರುತ್ತಾರೆ. ಆ ಫೈಲು ಮೇಜಿನಿಂದ ಮೇಜಿಗೆ, ಕೈಯಿಂದ ಕೈಗೆ, ಅಧಿಕಾರಿಯಿಂದ ಅಧಿಕಾರಿಗೆ, ಊರಿಂದ ಊರಿಗೆ ಹಿಂದೆ ಮುಂದೆ ಓಡಾಡಿ ವಿಷಯ ತೀರ್ಮಾನಕ್ಕೆ ಬರಬೇಕಾದರೆ ಹೆಚ್ಚುಕಾಲ ಹಿಡಿಯುತ್ತದೆ. ಅತಿನಿಯಮಬದ್ಧತೆ ಅಥವಾ ದೀರ್ಘಸೂತ್ರತೆಯನ್ನು ಈ ದೃಷ್ಟಿಯಿಂದ ವಿಳಂಬ ರೀತಿ ಎಂದೂ ಕರೆಯಬಹುದು. ಇದನ್ನು ಸಾಕಷ್ಟು ಕಡಿಮೆಮಾಡಿ, ಅಧಿಕಾರಿಯಾದವನು ತನ್ನ ಕೈಗೆ ಬಂದ ಸಮಸ್ಯೆಯನ್ನು ನ್ಯಾಯಬದ್ಧವಾಗಿ ಆದರೂ ಬೇಗ ಇತ್ಯರ್ಥ ಮಾಡುವುದರಿಂದ ದೇಶಕ್ಕೆ ಹಿತ.			
(ಎಂ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ